ಕಾಕ್ಸ್ ಕೂಂಬ್   

  ನಾನಾ ಬಗೆಯ ಬಣ್ಣಗಳಿಂದ ಕೂಡಿದ ಅಂದವಾದ ಹೂ ಬಿಡುವ ವಾರ್ಷಿಕ ಸಸ್ಯ. ಹೂಗೊಂಚಲುಗಳು ಹುಂಜದ ತಲೆಯ ಮೇಲಿನ ಶಿಖೆಯನ್ನು ಹೋಲುವುದರಿಂದ ಇದಕ್ಕೆ ಈ ಹೆಸರು. ಕನ್ನಡದಲ್ಲಿ ಕೋಳಿಜುಟ್ಟು ಗಿಡ ಎಂಬ ಹೆಸರೂ ಇದೆ. ಇದು ಸುಂದರವಾದ ಉದ್ಯಾನಸಸ್ಯವೆಂದು ಪ್ರಸಿದ್ಧವಾಗಿದೆ. ಕುಂಡಗಳಲ್ಲಿ, ಮಡಿಗಳಲ್ಲಿ ಬೆಳೆಸುತ್ತಾರೆ. ಇದು ದಂಟಿನ ಸೊಪ್ಪಿನ ಕುಟುಂಬವಾದ ಅಮರಾಂತೇಸೀ ಕುಟುಂಬಕ್ಕೆ ಸೇರಿದೆ. ಇದರ ಶಾಸ್ತ್ರೀಯ ಹೆಸರು ಸಿಲೋಸಿಯ ಕ್ರಿಸ್ಟೇಟ. ಸುಮಾರು 35-60 ಸೆಂ.ಮೀ. ಎತ್ತರಕ್ಕೆ ಬೆಳೆಯುವ ಮೂಲಿಕೆ ಸಸ್ಯ (ಹರ್ಬ್) ಇದು. ಎಲೆಗಳು ಉದ್ದವಾಗಿವೆ; ಅವುಗಳ ಜೋಡಣೆ ಪರ್ಯಾಯ ಮಾದರಿಯದು. ಗಿಡಕ್ಕೆ ಸುಮಾರು 5 ತಿಂಗಳ ವಯಸ್ಸಾದಾಗ ಮುಖ್ಯ ಕಾಂಡದ ತುದಿಯಲ್ಲಿ ಸಂಕೀರ್ಣ ಮಾದರಿಯ ಒಂದು ದೊಡ್ಡ ಹೂ ಗೊಂಚಲು ಹುಟ್ಟುತ್ತದೆ. ಇದು ಬುಡದಲ್ಲಿ ಚಪ್ಪಟೆಯಾಗಿಯೂ ತುದಿಯಲ್ಲಿ ಮುದ್ದೆಯಾಗಿಯೂ ಇದೆ. ಅಲ್ಲದೆ ಮೇಲ್ಭಾಗದಲ್ಲಿನ ಕವಲುಗಳೆಲ್ಲ ಬಹಳ ಒತ್ತಾಗಿಯೂ ಅಲೆಯಲೆಯಾಗಿಯೂ ಜೋಡಣೆಯಾಗಿವೆ. ಹೂಗೊಂಚಲು ಮಖಮಲ್ಲಿನಂತೆ ಮೃದುವಾಗಿ ಕೆಂಪು, ತಿಳಿಗೆಂಪು, ಹಳದಿ, ಕಿತ್ತಳೆ, ಊದಾ ಮುಂತಾದ ಬಣ್ಣಗಳಿಂದ ಕೂಡಿ ನೋಡಲು ಬಲು ಆಕರ್ಷಕವಾಗಿದೆ. ಇದು ಸುಮಾರು ಒಂದೂವರೆ ತಿಂಗಳಿನವರಿಗೂ ಕೆಡದಂತೆ ಬಾಡದಂತೆ ಗಿಡದ ಮೇಲಿರುವುದು ಇದರ ವೈಶಿಷ್ಟ್ಯ. ಹೂಗಳು ಬಲು ಚಿಕ್ಕ ಗಾತ್ರದವು. ಒಂದೊಂದಕ್ಕೂ ವರ್ಣಮಯವಾದ ಬ್ರ್ಯಾಕ್ಟುಗಳಿವೆ. ಪ್ರತಿಹೂವಿನಲ್ಲೂ 5 ಬಿಡಿ ಬಿಡಿಯಾದ ಪೆರಿಯಾಂತು ಪಾಲಿಗಳೂ 5 ಕೇಸರಗಳೂ ಒಂದೇ ಕೋಣೆಯುಳ್ಳ ಉಚ್ಚಸ್ಥಾನದ ಅಂಡಾಶಯವೂ ಇವೆ. ಅಂಡಕಗಳು 4-8. ಫಲ ಚೀಲದಂತೆ ಕಾಣುತ್ತದೆ. ಇದಕ್ಕೆ ಪೈಕ್ಸಿಸ್ ಎಂದು ಹೆಸರು. ಬೀಜಗಳು ಅತಿ ಚಿಕ್ಕವು; ಅವಕ್ಕೆ ಗಟ್ಟಿಯಾದ ಹೊದಿಕೆಯಿದೆ. ಹೂಗೊಂಚಲಿನ ಕೆಳಭಾಗದಲ್ಲಿರುವ ಹೂಗಳಲ್ಲಿ ಮಾತ್ರ ಬೀಜಗಳು ಉತ್ಪತ್ತಿಯಾಗುತ್ತವೆ.

 ಉದ್ಯಾನಪ್ರಾಮುಖ್ಯವನ್ನು ಪಡೆದಿರುವ ಈ ಸಸ್ಯವನ್ನು ಬೀಜಗಳ ಮುಖಾಂತರ ವೃದ್ಧಿಸಬಹುದು. ಮೊದಲು ಬೀಜಗಳನ್ನು ಒಟ್ಲು ಪಾತಿಗಳಲ್ಲಿ ಬಿತ್ತಬೇಕು. ಬೀಜ ಮೊಳೆತು ಹುಟ್ಟಿದ ಸಸಿಗಳು 4-6 ಎಲೆಗಳುಳ್ಳವಾದ ಮೇಲೆ ಬೇರೆ ಮಡಿಗಳಿಗೊ ಕುಂಡಗಳಿಗೊ ಸ್ಥಳಾಂತರಿಸಬೇಕು. ಮಡಿಗಳಲ್ಲಿ ಬೆಳೆಸುವುದಾದರೆ ಸಸಿಗಳಿಗೆ ಒಂದರಿಂದ ಒಂದೂವರೆ ಅಡಿ ಅಂತರವಿರಬೇಕು. ಅನಂತರ ಒಂದೂವರ, ಎರಡು ಮತ್ತು ಮೂರು ತಿಂಗಳುಗಳಿಗೊಮ್ಮೆಂiÀiಂತೆ ಮೂರು ಬಾರಿ ಮೇಲುಗೊಬ್ಬರ ಕೊಡಬೇಕು. ಆಮೇಲೆ 5 ಸಲ ಹಿಂಡಿ ಗೊಬ್ಬರದ ದ್ರಾವಣ ಹಾಕಬೇಕು. ಹೀಗೆ ಮಾಡಿದಲ್ಲಿ ಗಿಡದ ಬೆಳೆವಣಿಗೆ ಹುಲುಸಾಗಿದ್ದು ಸುಮಾರು 5 ತಿಂಗಳಿಗೆ ಹೂ ಬಿಡುತ್ತದೆ.

 ಕಾಕ್ಸ್‍ಕೂಂಬಿಗೆ ಔಷಧಿಯ ಮಹತ್ತ್ವವೂ ಇದೆ. ಅತಿಸಾರ ಮುಂತಾದ ರೋಗಗಳಿಗೆ ಹೂವಿನ ಭಾಗಗಳನ್ನು ಬಳಸುವುದುಂಟು.         

(ಎಂ.ಎಸ್.ಎಸ್.ಆರ್.; ಕೆ.)

         (ಪರಿಷ್ಕರಣೆ: ಕೆ ಬಿ ಸದಾನಂದ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ